ರಟ್ಟಕವಿ
ಸು. 1300.  ರಟ್ಟಮತ ಎಂಬ ಗ್ರಂಥದ ಕರ್ತೃ.  ಮಾರಸಿಂಹ (973 - 74) ಚಮೂಪತಿಯಾಗಿ ಕಾಡಮರಸನ ವಂಶದ 16 ನೆಯ ತಲೆಯಾಗಿ ಹುಟ್ಟಿದ ನಾಗಕುಮಾರ ಇವನ ತಂದೆ. ಬೂತನಣುಗಂ ಎಂದು ಕವಿ ಹೇಳಿಕೊಂಡಿರುವುದರಿಂದ ಇವನ ತಂದೆ ನಾಗಕುಮಾರನಿಗೆ ಬೂತುಗ ಎಂಬ ಹೆಸರೂ ಇದ್ದಿರಬಹುದೆಂದು ತೋರುತ್ತದೆ. ನೆಗಳ್ ನಿಜಸಂತೆಗೆ ಚಂದ್ರಲೇಖೆಗೆ ಪೇಳ್ ಕನ್ನಡದಿಂ ಎಂದು ಗ್ರಂಥದಲ್ಲಿ ತಿಳಿಸುವುದರಿಂದ ಕವಿಯ ಹೆಸರು ಅಭಯಾಂಬುದಿ ಎಂದೂ ಮಗಳ ಹೆಸರು ಚಂದ್ರಲೇಖೆಯೆಂದೂ ತಿಳಿದುಬರುತ್ತದೆ. ಜಿನನಗರಪತಿ, ಗಿರಿನಗರಾಧೀಶ್ವರ ಎಂದು ತನ್ನನ್ನು ವಿಶೇಷಿಸಿಕೊಂಡಿರುವುದರಿಂದ ಈತ ಯಾವುದಾದರೂ ಒಂದು ನಗರಕ್ಕೆ ಅಧಿಪತಿಯಾಗಿದ್ದಿರಬಹದು. ರಟ್ಟವೆಡಂಗ, ಸುಕವಿನಿಧಾನ ಎಂಬವು ಬಿರುದಿಗಳಿದ್ದಿರಬಹುದು. ನಯಬಂಧು, ಜಿನದಾಸ, ಅರ್ಹದ್ದಾಸ, ಸಮ್ಯಕ್ತ್ವರತ್ನಾಕರ, ರಟ್ಟಕಂದರ್ಪ, ಕವಿಗಳಾಭರಣ, ರಟ್ಟಕವೀಂದ್ರ, ಕವಿಕಂಜಸಂಭವ, ಸಹಜ ಕವೀಶ್ವರ, ಜಿನಧರ್ಮ ವತ್ಸಲ ಎಂದೂ ಈತ ತನ್ನನ್ನು ವಿಶೇಷಿಸಿಕೊಂಡಿದ್ದಾನೆ.

ರಟ್ಟಮತ ವೃತ್ತ, ಕಂದ, ರಗಳೆ, ತ್ರಿಪದಿ, ಈ ವೃತ್ತಭೇದಗಳಿಂದ ಕೂಡಿ ರಚಿತವಾಗಿದೆ. ಇದರಲ್ಲಿರುವ ಸು. 900 ಪದ್ಯಗಳಲ್ಲಿ ಮಳೆಯ ಕುರುಹು, ಆಕಸ್ಮಿಕ, ಲಕ್ಷಣ, ಶಕುನ, ವಾಯುಚಕ್ರ, ಗೋಪ್ರವೇಶ, ಭೂಕಂಪ, ಭೂಜಾತ ಫಲ, ಗರ್ಭಲಕ್ಷಣ, ದ್ರೋಣಸಂಖ್ಯೆ, ಮಿಂಚಿನ ಲಕ್ಷಣ, ಪ್ರತಿಸೂರ್ಯಲಕ್ಷಣ, ಸಂವತ್ಸರ ಫಲ, ಗ್ರಹಗಳ ಪಗೆ ಕಳೆ ಮೇಘಗಳ ನಾಮಕುಲ, ವರ್ಣಧ್ವಾನ, ವಿಚಾರ, ವೇಶ ವೃಷ್ಟ, ಮಾಸಫಲ, ರಾಹುಚಕ್ರ, ನಕ್ಷತ್ರ ಫಲ ಬಿತ್ತುವ ಶಕುನ, ಉದಕಾರ್ಗಳ, ಸಂಕ್ರಾಂತಿ ಫಲ ಈ ವಿಷಯಗಳ ಉಕ್ತವಾಗಿವೆ. ಗ್ರಂಥ ಅಸಮಗ್ರವಾಗಿದೆ. 14 ನೆಯ ಶತಮಾನದಲ್ಲಿದ್ದ ಭಾಸ್ಕರನೆಂಬ ಆಂಧ್ರಕವಿ ರಟ್ಟಮತವನ್ನು ತೆಲುಗಿಗೆ ಭಾಷಾಂತರ ಮಾಡಿದ್ದಾನೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ